ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಅಪಪ್ರಚಾರ; ಸ್ನೇಹಿತನನ್ನು ಕೊಲೆಗೈದು ಜೋಕಟ್ಟೆಯಲ್ಲಿ ತೋಡಿಗೆಸೆದಿದ್ದ ಆರೋಪಿ, ಎರಡೇ ದಿನದಲ್ಲಿ ಬಿಹಾರ ಮೂಲದ ಆರೋಪಿಗಳನ್ನು ಬಂಧಿಸಿದ ಪಣಂಬೂರು ಪೊಲೀಸರು

13-06-26 09:17 pm       HK News Staffer   ಕ್ರೈಂ

ಪಣಂಬೂರು ಠಾಣೆ ವ್ಯಾಪ್ತಿಯ ತೋಕೂರು ಜೋಕಟ್ಟೆಯಲ್ಲಿ ಬಿಹಾರ ಮೂಲದ ಯುವಕನನ್ನು ಕೊಲೆಗೈದು ತೋಡಿನಲ್ಲಿ ಶವ ಎಸೆದು ಹೋದ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಗಳೂರು, ಜೂನ್ 13: ಪಣಂಬೂರು ಠಾಣೆ ವ್ಯಾಪ್ತಿಯ ತೋಕೂರು ಜೋಕಟ್ಟೆಯಲ್ಲಿ ಬಿಹಾರ ಮೂಲದ ಯುವಕನನ್ನು ಕೊಲೆಗೈದು ತೋಡಿನಲ್ಲಿ ಶವ ಎಸೆದು ಹೋದ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಜೂನ್ 10ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ 62ನೇ ತೋಕೂರು ಗ್ರಾಮದ ಜೋಕಟ್ಟೆ ಅರಿಕೆರೆ ಎಂಬಲ್ಲಿ MSEZ (ಮಂಗಳೂರು ವಿಶೇಷ  ಆರ್ಥಿಕ ವಲಯ) ಗೆ ಸೇರಿದ ನೀರು ಹರಿಯುವ ತೋಡಿನಲ್ಲಿ 35-40 ವರ್ಷದ ಅಪರಿಚಿತ ಗಂಡಸಿನ ಮೃತದೇಹ ಕುತ್ತಿಗೆ ಕೊಯ್ದು ಕೊಲೆ ಮಾಡಿದ  ಸ್ಥಿತಿಯಲ್ಲಿ ದೊರೆತಿತ್ರು. ಈ ಬಗ್ಗೆ  ಕಿಶೋರ್ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.‌ 

ಪ್ರಮುಖ ಆರೋಪಿ, ಬಿಹಾರ ದರ್ಬಾಂಗ ಜಿಲ್ಲೆಯ ನಿವಾಸಿ, ಹಾಲಿ ಜೋಕಟ್ಟೆಯಲ್ಲಿ ನೆಲೆಸಿದ್ದ ಪ್ರಶಾಂತ್ ಕುಮಾರ್ (36) ನನ್ನು ಗೋವಾ ರಾಜ್ಯದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಜೂನ್ 13ರಂದು ನಸುಕಿನ 1.30 ಗಂಟೆಗೆ ಪತ್ತೆಹಚ್ಚಿ ಬಂಧಿಸಲಾಗಿದೆ. ಆತನ ಮಾಹಿತಿಯಂತೆ, ಕೃತ್ಯದಲ್ಲಿ ಭಾಗಿಯಾದ ಇನ್ನೊಬ್ಬ ಆರೋಪಿ ಬಿಹಾರ ಧರಮ್ ಪುರ ನಿವಾಸಿ ಪಿಂಕು ಮಹ್ತೋ( 33) ನನ್ನು ಜೋಕಟ್ಟೆ ವಿಜಯ ವಿಠಲ ಭಜನಾ ಮಂದಿರದ ಬಳಿಯಿಂದ ದಸ್ತಗಿರಿ ಮಾಡಲಾಗಿದೆ. 

ಆರೋಪಿಗಳು ಬಿಹಾರ ರಾಜ್ಯದವರಾಗಿದ್ದು, ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ತಮ್ಮ ಸಂಸಾರದೊಂದಿಗೆ ವಾಸವಿರುತ್ತಾರೆ. ಪ್ರಶಾಂತ್ ಕುಮಾರ್ ಎಂ.ಆರ್.ಪಿ.ಎಲ್ ನಲ್ಲಿ ವೆಲ್ಡಿಂಗ್ ಕೆಲಸವನ್ನು ಮತ್ತು 2ನೇ ಆರೋಪಿ ಪಿಂಕೂ ಮೆಹ್ತೋ ಬಾರ್ ಬೈಂಡಿಂಗ್ ಕೆಲಸ ಮಾಡಿಕೊಂಡಿದ್ದ.‌ ಪ್ರಕರಣದಲ್ಲಿ ಅಪರಿಚಿತ ಶವದ ಗುರುತು ಪತ್ತೆ ಹಚ್ಚಲಾಗಿದ್ದು ಮೃತನ ಹೆಸರು ಬಿಹಾರದ ಪೂರ್ನಿಯಾ ಜಿಲ್ಲೆಯ ನಿವಾಸಿ ಚಂದನ್ ಚೌಹಾನ್(39) ಎಂಬುದಾಗಿ ತನಿಖೆಯ ಸಮಯ ತಿಳಿದುಬಂದಿದೆ. 

ಆರೋಪಿತ ಪ್ರಶಾಂತ್ ಕುಮಾರ್‌ ಪತ್ನಿ ಕಳೆದ ಎಪ್ರಿಲ್ ತಿಂಗಳಿನಲ್ಲಿ ಇನ್ನೋರ್ವ ಯುವಕನ ಜೊತೆ ಮನೆ ಬಿಟ್ಟು ಹೋಗಿದ್ದು, ಆಕೆ ಮನೆ ಬಿಟ್ಟು ಹೋಗಲು ಚಂದನ್ ಚೌಹಾನ್  ಸಹಾಯ ಮಾಡಿರುವುದಾಗಿ ತಿಳಿದು ಆತನ ಕೊಲೆಗೆ ಸಂಚು ರೂಪಿಸಿದ್ದ. ಪ್ರಶಾಂತ್ ಅಪಘಾತದಿಂದ ಮನೆಯಲ್ಲಿಯೇ ಇರುವುದರಿಂದ ಪತ್ನಿ ಸಣ್ಣ ಹುಡುಗನ ಜೊತೆಯಲ್ಲಿ ಮನೆ ಬಿಟ್ಟು ಹೋಗಿರುವುದಾಗಿ ಚಂದನ್ ಅಪಪ್ರಚಾರ ಮಾಡಿದ್ದ. ಇದರ ಸಿಟ್ಟಿನಲ್ಲಿ, ಪ್ರಶಾಂತ್ ತನ್ನ ಸ್ನೇಹಿತ ಪಿಂಕೂ ಮಹ್ತೋ ಜೊತೆ ಸೇರಿ ಜೂನ್ 9ರಂದು ಸಂಜೆ 6 ಗಂಟೆ ವೇಳೆ ಚಂದನ್ ತಲೆ, ಮುಖಕ್ಕೆ ದೊಣ್ಣೆಯಿಂದ ಹೊಡೆದು ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿ ಮೃತದೇಹವನ್ನು ಜೋಕಟ್ಟೆ ಬಾಡಿಗೆ ಮನೆಯ ಪಕ್ಕದಲ್ಲಿರುವ ತೋಡಿನಲ್ಲಿ ಬಿಸಾಡಿದ್ದರು. 

ಪ್ರಕರಣವನ್ನು ಅತೀ ಶೀಘ್ರದಲ್ಲಿ ಭೇದಿಸುವಲ್ಲಿ ಪಣಂಬೂರು ಪೊಲೀಸರು ಸಫಲರಾಗಿದ್ದು ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ ಕೆ. ಅವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್   ಸಲೀಂ ಅಬ್ಬಾಸ್ ಪ್ರಕರಣವನ್ನು ಭೇದಿಸಿರುತ್ತಾರೆ.  ಪಣಂಬೂರು ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಶ್ರೀಕಲಾ ಕೆ.ಟಿ, ಜ್ಞಾನಶೇಖರ ಹಾಗೂ ಸಿಬ್ಬಂದಿಗಳಾದ ಇಮ್ತಿಯಾಝ್, ಸುರೇಂದ್ರ, ಚೆರಿಯನ್, ದೀಪಕ್, ಫಕ್ಕಿರೇಶ್, ರಾಕೇಶ್, ಮಂಜುನಾಥ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.