ಬೀದಿ ಬದಿ ವ್ಯಾಪಾರಿಗೆ ನಿಂದಿಸಿ ವಿಡಿಯೋ ವೈರಲ್ ; ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಮತ್ತು ಅಜಯ್ ಅಂಚನ್ ವಿರುದ್ಧ ಪ್ರಕರಣ ದಾಖಲು

31-05-26 05:06 pm       HK News Staffer   ಕ್ರೈಂ

ನಗರದ ಸ್ಟೇಟ್‌ ಬ್ಯಾಂಕ್ ಬಳಿ ಬೀದಿ ಬದಿ ವ್ಯಾಪಾರಿಗಳನ್ನು ಹೊರಗಿನವರೆಂದು ತಾರತಮ್ಯ ಭಾವದಿಂದ ಅವಹೇಳನಕಾರಿ ರೀತಿಯಲ್ಲಿ ಪ್ರಶ್ನೆ ಮಾಡಿ ವಿಡಿಯೋ ಮಾಡಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದರ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮ, ಭಾಷೆ, ಪ್ರಾದೇಶಿಕ ಗುರುತುಗಳ ಆಧಾರದಲ್ಲಿ ದ್ವೇಷ ಉಂಟು ಮಾಡುವ ರೀತಿಯಲ್ಲಿ ವರ್ತಿಸಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರು, ಮೇ 31: ನಗರದ ಸ್ಟೇಟ್‌ ಬ್ಯಾಂಕ್ ಬಳಿ ಬೀದಿ ಬದಿ ವ್ಯಾಪಾರಿಗಳನ್ನು ಹೊರಗಿನವರೆಂದು ತಾರತಮ್ಯ ಭಾವದಿಂದ ಅವಹೇಳನಕಾರಿ ರೀತಿಯಲ್ಲಿ ಪ್ರಶ್ನೆ ಮಾಡಿ ವಿಡಿಯೋ ಮಾಡಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದರ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮ, ಭಾಷೆ, ಪ್ರಾದೇಶಿಕ ಗುರುತುಗಳ ಆಧಾರದಲ್ಲಿ ದ್ವೇಷ ಉಂಟು ಮಾಡುವ ರೀತಿಯಲ್ಲಿ ವರ್ತಿಸಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ನಗರದ ಸ್ಟೇಟ್‌ಬ್ಯಾಂಕ್ ಪ್ರದೇಶದಲ್ಲಿ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಮತ್ತು ರವಿ ಅಂಚನ್ ತಮ್ಮ ಕುಡ್ಲ ರಾಂಪೇಜ್ ಯೂಟ್ಯೂಬ್ ವಾಹಿನಿಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ನೀವು ಹೊರಗಿನವರು, ತುಳುವರಲ್ಲ. ಹೊರಗಿನವರು ಇಲ್ಲಿ ಬಂದು ವ್ಯಾಪಾರ ಮಾಡಲು ಅವಕಾಶ ಇಲ್ಲ ಎಂದು ಸಾರ್ವಜನಿಕವಾಗಿ ನಿಂದಿಸಿದ್ದಲ್ಲದೆ, ಪ್ರಶ್ನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ಘಟನೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಎಡ ಪಂಥೀಯ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿತ್ತು. 

ಘಟನೆ ನಡೆದ ದಿನ ಸ್ಥಳದಿಂದ ತೆರಳಿದ್ದ ಬೀದಿ ಬದಿ ವ್ಯಾಪಾರಿ ಸಯ್ಯಿದ್ ಜಬೀ ಉಲ್ಲಾ ಎಂಬವರು ಬಂದರು ಪೊಲೀಸ್ ಠಾಣೆಗೆ ಆಗಮಿಸಿ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮಹಿಳೆ ಪ್ರಸನ್ನ ರವಿ ಹಾಗೂ ಘಟನೆಯ ವಿಡಿಯೋ ಚಿತ್ರೀಕರಿಸಿದ್ದ ಅಜಯ್ ಅಂಚನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಕೇವಲ ಧರ್ಮದ ಆಧಾರದ ಮೇಲೆ ಮಾತ್ರವಲ್ಲದೆ ಜನ್ಮಸ್ಥಳ, ಪ್ರದೇಶ, ಭಾಷೆ ಅಥವಾ ಇತರ ಯಾವುದೇ ಗುರುತುಗಳ ಆಧಾರದ ಮೇಲೆ ವ್ಯಕ್ತಿ ಅಥವಾ ಸಮುದಾಯದ ವಿರುದ್ಧ ದ್ವೇಷ, ವೈಷಮ್ಯ ಅಥವಾ ಸಾಮಾಜಿಕ ಸೌಹಾರ್ದತೆಯನ್ನು ಹಾಳುಮಾಡುವ ಪ್ರಯತ್ನ ನಡೆಸಿದರೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 196ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

ಘಟನೆ ಕುರಿತು ವಿಡಿಯೋ ದೃಶ್ಯಗಳು ಹಾಗೂ ಇತರೆ ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕ ಬಿಎನ್‌ಎಸ್ ಕಲಂ 196 ಹಾಗೂ 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ತನಿಖೆಯ ಮುಂದಿನ ಹಂತದಲ್ಲಿ ಹೆಚ್ಚಿನ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಭಿಪ್ರಾಯ ಮತ್ತು ಕಳವಳ ವ್ಯಕ್ತಪಡಿಸುವ ಹಕ್ಕು ಇದೆ. ಆದರೆ ಆ ಹಕ್ಕಿನ ಬಳಕೆ ಕಾನೂನಿನ ಮಿತಿಯೊಳಗೆ ಇರಬೇಕು. ಯಾವುದೇ ವ್ಯಕ್ತಿ ಅಥವಾ ಸಮುದಾಯದ ವಿರುದ್ಧ ದ್ವೇಷ ಅಥವಾ ಉದ್ವಿಗ್ನತೆ ಸೃಷ್ಟಿಸುವ ರೀತಿಯ ವರ್ತನೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಘಟನೆ ನಡೆದ ದಿನ ಪ್ರಸನ್ನ ರವಿ ಅವರೂ ಬೀದಿ ಬದಿ ವ್ಯಾಪಾರಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವಿಡಿಯೋ ಸೇರಿದಂತೆ ಲಭ್ಯವಿದ್ದ ಮಾಹಿತಿಗಳನ್ನು ಪರಿಶೀಲನೆ ನಡೆಸಿದ್ದರು. ಆದರೆ ಆ ಸಂದರ್ಭದಲ್ಲಿ ಅಪರಾಧ ಪ್ರಕರಣ ದಾಖಲಿಸಲು ಅಗತ್ಯವಾದ ಅಂಶಗಳು ಕಂಡುಬರದ ಹಿನ್ನೆಲೆಯಲ್ಲಿ ಯಾವುದೇ ಎಫ್‌ಐಆರ್ ದಾಖಲಿಸಲಾಗಿರಲಿಲ್ಲ.

ಬದಲಾಗಿ ಮಹಿಳೆಯ ದೂರನ್ನು ನಾನ್ ಕಾಗ್ನಿಜಿಬಲ್ (ಎನ್‌ಸಿ) ಪ್ರಕರಣವಾಗಿ ದಾಖಲಿಸಿ ಸ್ವೀಕೃತಿ ಪತ್ರವನ್ನು ನೀಡಲಾಗಿತ್ತು. ಬಳಿಕ ಅವರು ಕಾನೂನು ಪ್ರಕ್ರಿಯೆಯಂತೆ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ನಿರ್ದೇಶನದ ಮೇರೆಗೆ ಆ ದೂರಿನ ಕುರಿತೂ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

A case has been registered at the Bunder Police Station against social activist Prasanna Ravi and Ajay Anchan of kudla rampage following a viral video in which a roadside vendor was allegedly questioned and insulted on the basis of his regional identity.