ಸಾಫ್ಟ್ ಸೆಕ್ಯುಲರ್ ಸಿಎಂ ಡಿಕೆ- ಕಟ್ಟರ್ ವಾದಿ ಪಿಕೆ ! ರಾಜ್ಯ ಬಿಜೆಪಿಯಲ್ಲಿ ಜೋಷಿ- ಸೋಮಣ್ಣ ಫ್ರಂಟ್ ಲೈನ್, ವಿಜಯೇಂದ್ರ ಸೇಫ್ ಝೋನ್ ! ಪರಿಷತ್ತಿಗೆ ಕುಮಾರಣ್ಣ ಟೆಸ್ಟ್ ಡೋಸು

16-06-26 02:03 pm       ಆರ್.ಟಿ ವಿಠಲಮೂರ್ತಿ, ಹಿರಿಯ ಪತ್ರಕರ್ತರು   ಅಂಕಣಗಳು

ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಕರ್ನಾಟಕಕ್ಕೆ ಬಂದು ಹೋದ ನಂತರ ರಾಜ್ಯ ಬಿಜೆಪಿಯ ಚಿತ್ರ ಬದಲಾದಂತೆ ಕಾಣುತ್ತಿದೆ.ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಮತ್ತು ವಿ.ಸೋಮಣ್ಣ ಅವರ ಹೆಸರು ಫ್ರಂಟ್ ಲೈನಿಗೆ ಬಂದಿರುವುದೇ‌ ಇದಕ್ಕೆ ಸಾಕ್ಷಿ.

ಬೆಂಗಳೂರು, ಜೂನ್ 16: ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಕರ್ನಾಟಕಕ್ಕೆ ಬಂದು ಹೋದ ನಂತರ ರಾಜ್ಯ ಬಿಜೆಪಿಯ ಚಿತ್ರ ಬದಲಾದಂತೆ ಕಾಣುತ್ತಿದೆ.ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಮತ್ತು ವಿ.ಸೋಮಣ್ಣ ಅವರ ಹೆಸರು ಫ್ರಂಟ್ ಲೈನಿಗೆ ಬಂದಿರುವುದೇ‌ ಇದಕ್ಕೆ ಸಾಕ್ಷಿ. ಅಂದಹಾಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಎಂದು ಬಿಜೆಪಿ ಭಿನ್ನರು ಹೋರಾಡುತ್ತಿದ್ದರಲ್ಲ? ಅದಕ್ಕೂ ಪ್ರಲ್ಹಾದ ಜೋಷಿ, ಸೋಮಣ್ಣ ಅವರ ಹೆಸರು ಫ್ರಂಟ್ ಲೈನಿಗೆ ಬಂದಿರುವುದಕ್ಕೂ ಸಂಬಂಧವೇನಿಲ್ಲ. 

ಯಾಕೆಂದರೆ‌ ಮೊನ್ನೆ ಕರ್ನಾಟಕಕ್ಕೆ ಬಂದು ಹೋದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ರಾಜ್ಯಾಧ್ಯಕ್ಷ ಹುದ್ದೆಗೆ ಬೇರೆಯವರು ಬರಬೇಕು ಎಂಬ ಅಭಿಪ್ರಾಯದಲ್ಲೇನೂ ಇಲ್ಲ. ಬದಲಿಗೆ ಪಕ್ಷದ ಸಂಘಟನೆಯಲ್ಲಿ ಆಗಬೇಕಾದ ಕೆಲ ಮಾರ್ಪಾಡುಗಳನ್ನಷ್ಟೇ ಸೂಚಿಸಿ ಹೋಗಿದ್ದಾರೆ.ಮತ್ತು ವಿಜಯೇಂದ್ರ ಅವರು ಕೂಡಾ ತಕ್ಷಣ ಅಂತಹ ತಿದ್ದುಪಡಿಗಳನ್ನು ಮಾಡಿದ್ದಾರೆ. ಅರ್ಥಾತ್,ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸುವ ಬಿಜೆಪಿ ಭಿನ್ನರ ಹೋರಾಟವೇನಿದೆ? ತಕ್ಷಣದ ದೃಷ್ಟಿಯಿಂದ ಅದಕ್ಕೆ ಶಕ್ತಿ ದೊರೆಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. 

ಆದರೆ ವಿಜಯೇಂದ್ರ ಸೇಫ್ ಎಂಬ ಸಧ್ಯದ ಮಾತುಗಳೇನಿವೆ?ಇದರ ಮಧ್ಯೆಯೇ ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಮತ್ತು ವಿ.ಸೋಮಣ್ಣ ಅವರ ಹೆಸರುಗಳು ಫ್ರಂಟ್ ಲೈನಿಗೆ ಬಂದಿವೆ. ಈ ಇಬ್ಬರು ನಾಯಕರು ಇತ್ತೀಚೆಗೆ ರಾಜ್ಯಾದ್ಯಂತ ಹೆಚ್ಚು ಪ್ರವಾಸ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ. ಉದಾಹರಣೆಗೆ ಪ್ರಲ್ಹಾದ  ಜೋಷಿ ಅವರನ್ನೇ ತೆಗೆದುಕೊಳ್ಳಿ.ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಹಲವು ಕಾರ್ಯಕ್ರಮಗಳಲ್ಲಿ ಪ್ರಲ್ಹಾದ ಜೋಷಿ ಭಾಗಿಯಾಗುತ್ತಿದ್ದಾರೆ. ಅಷ್ಟೇ ಅಲ್ಲ,ಪಕ್ಷದ ರಾಜ್ಯ ಘಟಕದಲ್ಲಿ ನಡೆಯುತ್ತಿರುವ ಹಲವು ಬೆಳವಣಿಗೆಗಳ ಹಿಂದೆ ಅವರ ನೆರಳು ಕಾಣುತ್ತಿದೆ.

ಕಳೆದ ವಾರ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಬಿಜೆಪಿಯ ಫ್ರೊ.ಎಂ.ನಾಗರಾಜ್ ಆಯ್ಕೆಯಾದರಲ್ಲ? ಇವರ ಆಯ್ಕೆಯ ಹಿಂದಿದ್ದವರು ಇದೇ ಪ್ರಲ್ಹಾದ ಜೋಷಿ. ಅಂದ ಹಾಗೆ ಯಡಿಯೂರಪ್ಪ ಟೀಮು ರಾಜ್ಯಸಭೆಗೆ ಡಿ.ವಿ.ಸದಾನಂದಗೌಡರನ್ನು ಕಳಿಸಲು ಅತ್ಯುತ್ಸಾಹದಿಂದಿದ್ದರೂ ಕೊನೆ ಘಳಿಗೆಯಲ್ಲಿ ನಾಗರಾಜ್ ಅವರ ಹೆಸರು ಮುನ್ನೆಲೆಗೆ ಬಂತು. ಇದಕ್ಕೆ ಪ್ರಲ್ಹಾದ ಜೋಷಿಯಯವರೇ ನೇರ ಕಾರಣ. ಎಷ್ಟೇ ಆದರೂ ನಾಗರಾಜ್ ಅವರು ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು.ಹೀಗಾಗಿ ಅವರನ್ನು ರಾಜ್ಯಸಭೆಗೆ ಕಳಿಸಿದರೆ ಒಳ್ಳೆಯ ಮೆಸೇಜು ಹೋಗುತ್ತದೆ.ಇವತ್ತು ಸಂಘಟನೆಗಾಗಿ ದುಡಿದವರನ್ನು ಪಕ್ಷ ಗುರುತಿಸುತ್ತದೆ ಎಂಬ ಸಿಗ್ನಲ್ಲು ಹೋದರೆ ಬೆಸ್ಟು ಅಂತ ಪ್ರಲ್ಹಾದ ಜೋಷಿ ಅವರು ಅಮಿತ್ ಶಾ ಅವರಿಗೆ ವಿವರಿಸಿದ್ದರಂತೆ.
ಹೀಗಾಗಿ ದೀರ್ಘ ಕಾಲದಿಂದ ಚಾಲನೆಯಲ್ಲಿದ್ದ ಡಿ.ವಿ.ಸದಾನಂದಗೌಡರ ಹೆಸರು ಮತ್ತು ಉಲ್ಕೆಯಂತೆ ಧಿಡೀರನೆ ಕಾಣಿಸಿಕೊಂಡಿದ್ದ ಸುಮಲತಾ ಅವರ ಹೆಸರು ಹಿಂದಕ್ಕೆ ಸರಿದು   ನಾಗರಾಜ್ ಅವರು ರಾಜ್ಯಸಭೆಗೆ ಎಂಟ್ರಿಯಾದರು.

ಇದೇ ರೀತಿ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರಿಗೆ ಟಿಕೆಟ್ ಕೊಡಬೇಕಿತ್ತಲ್ಲ?ಈ ಸಂದರ್ಭದಲ್ಲಿ ಎರಡು ಟಿಕೆಟುಗಳ ಪೈಕಿ ಒಂದು ಟಿಕೆಟನ್ನು ಮಹಿಳೆಯರಿಗೆ ಕೊಡಿ ಅಂತ ಬಿಜೆಪಿ ವರಿಷ್ಟರು  ಸೂಚಿಸಿದ್ದರಂತೆ. ಅದರ ಪ್ರಕಾರ ಮಹಿಳೆಯರ ಪೈಕಿ ಸಿ.ಮಂಜುಳಾ, ಪೂರ್ಣಿಮಾ ಪ್ರಕಾಶ್, ಮಧುಶ್ರೀ ಅವರುಗಳ ಪೈಕಿ ಒಬ್ಬರಿಗೆ ಟಿಕೆಟ್ ಕೊಡಬೇಕು ಅಂತ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಶಿಫಾರಸು ಮಾಡಿತ್ತು.

ಆದರೆ ಅಂತಿಮವಾಗಿ ಪಟ್ಟಿ ಹೊರಬಂದಾಗ ಲಿಂಗರಾಜ ಪಾಟೀಲ್ ಮತ್ತು ರಘು ಕೌಟಿಲ್ಯ ಅವರಿಗೆ ಟಿಕೆಟ್ ನೀಡಲಾಗಿತ್ತು. ಅಂದ ಹಾಗೆ ಹೀಗೆ ಟಿಕೆಟ್ ಪಡೆದವರ ಪೈಕಿ ರಘು ಕೌಟಿಲ್ಯ ಅವರು ವಿಜಯೇಂದ್ರ ಅವರ ಕ್ಯಾಂಡಿಡೇಟ್ ಅದರೆ ಲಿಂಗರಾಜ ಪಾಟೀಲ್ ಅವರು ಪ್ರಲ್ಹಾದ ಜೋಷಿ ಅವರ ಕ್ಯಾಂಡಿಡೇಟು. ಅರ್ಥಾತ್, ಈಗ ರಾಜ್ಯ ಬಿಜೆಪಿಯಲ್ಲಿ ಪ್ರಲ್ಹಾದ ಜೋಷಿ ಅವರ ಮಾತಿಗೆ ಹೆಚ್ಚು ಫೋರ್ಸು ಸಿಗುತ್ತಿದೆ.

ಪಕ್ಷದ ಮೂಲಗಳ ಪ್ರಕಾರ,ಹೀಗೆ ಪ್ರಲ್ಹಾದ ಜೋಷಿ ಅವರ ಮಾತಿಗೆ ಹೆಚ್ಚು ಬಲ ಸಿಗುತ್ತಿರುವುದಕ್ಕೆ ಮತ್ತು   ಇತ್ತೀಚೆಗೆ ಅವರು ಕರ್ನಾಟಕದಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿರುವುದಕ್ಕೆ ಒಂದು ಮುಖ್ಯ ಕಾರಣವಿದೆ.ಅದೆಂದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಪಕ್ಷ ಅಧಿಕಾರಕ್ಕೆ ಬಂದರೆ ನೀವು ಸಿಎಂ ಆಗಲು ರೆಡಿ ಇರಿ ಅಂತ ಸಂಘ ಪರಿವಾರದ ವರಿಷ್ಟರು ಅವರಿಗೆ ಸಿಗ್ನಲ್ ಕೊಟ್ಟಿದ್ದಾರೆ.ಮತ್ತು ಅವರು ಸಿಗ್ನಲ್ ಕೊಟ್ಟರು ಎಂದರೆ ಮೋದಿ-ಅಮಿತ್ ಶಾ ಜೋಡಿ ಅದನ್ನು ಒಪ್ಪುತ್ತದೆ. 

ಅಂದ ಹಾಗೆ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಪ್ರಲ್ಹಾದ ಜೋಷಿ ಅವರ ಹೆಸರು ಸಿಎಂ ಹುದ್ದೆಯ ರೇಸಿನಲ್ಲಿ ಕಾಣಿಸಿಕೊಂಡಿತ್ತು. 2021 ರಲ್ಲಿ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಇಳಿಸಲು ಪಕ್ಷದ ವರಿಷ್ಟರು ನಿರ್ಧರಿಸಿದರಲ್ಲ? ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಜಾಗಕ್ಕೆ ಯಾರನ್ನು ತರಬೇಕು ಅಂತ ತಲಾಶೆ ನಡೆದಾಗ ಪ್ರಲ್ಹಾದ ಜೋಷಿಯವರ ಹೆಸರು ಫ್ರಂಟ್ ಲೈನಿಗೆ ಬಂದಿತ್ತು. ಆದರೆ ಆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ,ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಒಂದು ಬಾಂಬು ಎಸೆದುಬಿಟ್ಟರು. ಮಹಾರಾಷ್ಟ್ರದ ಪೇಶ್ವೆ ಮೂಲದ ಬ್ರಾಹ್ಮಣರೊಬ್ಬರನ್ನು ಸಿಎಂ ಹುದ್ದೆಗೆ ತರಲು ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ಮುಂದಾಗಿದ್ದಾರೆ ಅಂತ ಅವತ್ತು ಅವರು ಹಾಕಿದ ಸ್ಮೆಲ್ ಬಾಂಬು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದ್ದಲ್ಲದೆ ಪ್ರಲ್ಹಾದ ಜೋಷಿ ಅವರ ಹೆಸರು ಇದ್ದಕ್ಕಿದ್ದಂತೆ ಸಿಎಂ ಹುದ್ದೆಯ ರೇಸಿನಿಂದ ಹಿಂದಕ್ಕೆ ಸರಿಯುವಂತೆ ಮಾಡಿತ್ತು.

ಕಾರಣ? ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದ ಲಿಂಗಾಯತ ನಾಯಕರನ್ನು ಕೆಳಗಿಳಿಸಿ ಬ್ರಾಹ್ಮಣರಿಗೆ ಪಟ್ಟ ಕಟ್ಟಲು ಬಿಜೆಪಿ ಹೊರಟಿದೆ ಎಂಬ ಮಾತು ಬರುತ್ತದಲ್ಲ? ಹೀಗಾಗಿ ಅವತ್ತು ಸಿಎಂ ಹುದ್ದೆಯ ರೇಸಿನಿಂದ ಪ್ರಲ್ಹಾದ ಜೋಷಿಯವರ ಹೆಸರು ಹಿಂದೆ ಸರಿದು ಲಿಂಗಾಯತ ಸಮುದಾಯದವರೇ ಆದ ಬಸವರಾಜ ಬೊಮ್ಮಾಯಿ ಅವರ ಹೆಸರು ಮುಂದಕ್ಕೆ ಬಂದಿತ್ತು.
ಆದರೆ ಈಗ ಪ್ರಲ್ಹಾದ ಜೋಷಿ ಅವರ ಹೆಸರು ಫ್ರಂಟ್ ಲೈನಿಗೆ ಬಂದರೆ ಹಿಂದಿನಂತೆ ರಿವರ್ಸ್ ಗೇರಿಗೆ ಬೀಳುವ ಸಾಧ್ಯತೆ ಕಡಿಮೆ.ಯಾಕೆಂದರೆ ಪಕ್ಷ ಅಧಿಕಾರಕ್ಕೆ ಬಂದಾಗ ಸೀನಿಯರ್ ಒಬ್ಬರು ಸಿಎಂ ಅಗಬೇಕು ಎಂಬ ಕೂಗು ಮೇಲೇಳುತ್ತದೆ.ಅಂತಹ ಸಂದರ್ಭದಲ್ಲಿ ಪ್ರಲ್ಹಾದ ಜೋಷಿಯವರಿಗೆ ಪಟ್ಟ ಕಟ್ಟಲು ತೀರ್ಮಾನಿಸಿದರೆ ಅಪಸ್ವರ ಎತ್ತುವವರು ಕಡಿಮೆ.

ಯಾಕೆಂದರೆ ವಿಜಯೇಂದ್ರ ವಯಸ್ಸಿನಲ್ಲಿ ಕಿರಿಯರಾಗಿರುವುದರಿಂದ ಮುಂದೆ ಅವರಿಗೆ ಅವಕಾಶ ಕೊಡಬಹುದು.ಅದರೆ ಈಗ ಪ್ರಲ್ಹಾದ ಜೋಷಿ ಇರಲಿ ಅಂತ ಹೇಳುವುದು ಬಿಜೆಪಿ ವರಿಷ್ಟರಿಗೆ ಸುಲಭ.

ಎಲ್ಲಕ್ಕಿಂತ ಮುಖ್ಯವಾಗಿ ಪ್ರಲ್ಹಾದ ಜೋಷಿ ಪಟ್ಟಕ್ಕೆ ಬರುತ್ತಾರೆ ಎಂದರೆ ಬಿ.ಎಲ್.ಸಂತೋಷ್ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿ ತನಕ ಹಿರಿಯರು ಅಂತ ಯಾರಿದ್ದಾರೆ?ಅವರು 'ಯಸ್' ಎನ್ನುತ್ತಾರೆ ಎಂಬುದು ಮೂಲಗಳ ಮಾತು. ಅಂದ ಹಾಗೆ ಇಂತಹ ಮಾತುಗಳ ನಡುವೆ ಕರ್ನಾಟಕದ ರಾಜಕೀಯ ಚಿತ್ರ ಹೇಗೆಲ್ಲ ಬದಲಾಗುತ್ತದೋ ಗೊತ್ತಿಲ್ಲ.ಆದರೆ ಸಧ್ಯಕ್ಕಂತೂ ಪ್ರಲ್ಹಾದ ಜೋಷಿಯವರ ಹೆಸರು ರಾಜ್ಯ ಬಿಜೆಪಿಯಲ್ಲಿ ಫ್ರಂಟ್ ಲೈನಿಗೆ ಬಂದಿದೆ.

ಇದೇ ರೀತಿ ಇತ್ತೀಚೆಗೆ ಪವರ್ ಫುಲ್ಲಾಗಿ ಕೇಳುತ್ತಿರುವ ಮತ್ತೊಂದು ಹೆಸರು ಎಂದರೆ ಕೇಂದ್ರ ಸಚಿವರಾದ ವಿ.ಸೋಮಣ್ಣ ಅವರದು. ಮೂಲಗಳ ಪ್ರಕಾರ,ಅವರು ಕೂಡಾ ಭವಿಷ್ಯದ ಸಿಎಂ ಆಗಲು ಸತತ ಕಸರತ್ತು ನಡೆಸುತ್ತಿದ್ದಾರೆ. ಮತ್ತು ಇದೇ ಕಾರಣಕ್ಕಾಗಿ ರೈಲ್ವೆ ಯೋಜನೆಗಳ ಹೆಸರಿನಲ್ಲಿ ಕರ್ನಾಟಕದಾದ್ಯಂತ ಪ್ರವಾಸ ಮಾಡುತ್ತಾ,ಜಿಲ್ಲೆಗಳ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾ ಮುನ್ನಡೆದಿದ್ದಾರೆ.ಮುಂದೇನಾಗುತ್ತದೋ ಕಾದು ನೋಡಬೇಕು.

ಸಾಫ್ಟ್ ಸೆಕ್ಯುಲರ್ ಡಿಕೆ, ಕಟ್ಟರ್ ಪಿಕೆ ! 

ಇನ್ನು ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆದ ನಂತರದ ಬೆಳವಣಿಗೆಗಳನ್ನು ಆರೆಸ್ಸೆಸ್ ನಾಯಕರು ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ.
ಅಂದ ಹಾಗೆ ಈ ಹಿಂದೆ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ  ಸರ್ಕಾರವಿದ್ದಾಗ ಒಂದು ಮಾತು ಸ್ಪಷ್ಟವಾಗಿತ್ತು.ಅದೆಂದರೆ ಪ್ರಧಾನಿ ವಾಜಪೇಯಿ ಮೃದು ಹಿಂದೂವಾದಿಯಾದರೆ ಗೃಹ ಸಚಿವ ಲಾಲ್ ಕೃಷ್ಣ ಅಡ್ವಾಣಿ ಕಟ್ಟರ್ ಹಿಂದೂವಾದಿ ಎಂಬುದು.
ಇವತ್ತು ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಇಂತಹದೇ ಒಂದು ಹೋಲಿಕೆ ಆರೆಸ್ಸೆಸ್ ನಾಯಕರಿಗೆ ಕಾಣುತ್ತಿದೆ. ಅದೆಂದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಫ್ಟ್ ಸೆಕ್ಯುಲರ್ ಆದರೆ,ಅವರ ಸಂಪುಟದಲ್ಲಿ ಗೃಹ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಕಟ್ಟರ್ ಸೆಕ್ಯುಲರ್ ಎಂಬುದು. ಯಾಕೆಂದರೆ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಆರೆಸ್ಸೆಸ್ ಪ್ರತಿಪಾದಿಸುವ ಸಿದ್ದಾಂತದ ಕಡುವಿರೋಧಿ.ಅದರೆ ಸಿಎಂ ಡಿ.ಕೆ.ಶಿವಕುಮಾರ್ ಹಿಂದೂವಾದಿಗಳು ಬೆಚ್ಚಿ ಬೀಳುವ ಲೆವೆಲ್ಲಿನಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸುತ್ತಾರೆ.

ಇವತ್ತು ಅರೆಸ್ಸೆಸ್ ನಾಯಕರು ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.ಯಾಕೆಂದರೆ ಪ್ರಿಯಾಂಕ್ ಖರ್ಗೆ ಎಷ್ಟೇ ಕಟುವಾಗಿ ಅರೆಸ್ಸೆಸ್ ವಿರುದ್ದ ಮಾತನಾಡಿದರೂ ಈ ಸರ್ಕಾರವನ್ನು ಹಿಂದಿನಂತೆ ಹಿಂದೂ ವಿರೋಧಿ ಸರ್ಕಾರ ಎನ್ನಲು ಸಾಧ್ಯವಿಲ್ಲ. ಪರಿಣಾಮ? ಇವತ್ತು ಏಕಾಏಕಿಯಾಗಿ ಡಿಕೆ ಸರ್ಕಾರದ ವಿರುದ್ದ ಮುಗಿಬೀಳುವ ಬದಲು ಅದರ ಪ್ರತಿಯೊಂದು ಹೆಜ್ಜೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಆರೆಸ್ಸೆಸ್ ನಾಯಕರು ನಿರ್ಧರಿಸಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ ಕರ್ನಾಟಕದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೇಲಿಂದ ಮೇಲೆ ಇಲ್ಲಿಗೆ ಬರಲು,ಮುಂದಿಡಬೇಕಾದ ಹೆಜ್ಜೆಗಳ ಕುರಿತಂತೆ ಮಾರ್ಗದರ್ಶನ‌ ಮಾಡಲು ನಿರ್ಧರಿಸಿದ್ದಾರೆ.

ಕುಮಾರಣ್ಣನ ಟೆಸ್ಟ್ ಡೋಸು

ಈ ಮಧ್ಯೆ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಎಂಟು ಮಂದಿ ಸ್ಪರ್ದಿಸಿದ್ದು,ಇದರಿಂದಾಗಿ ಕಾಂಗ್ರೆಸ್ ನ ವಿನಯ್ ಕಾರ್ತಿಕ್ ಮತ್ತು ಜೆಡಿಎಸ್ ನ ಗೋವಿಂದರಾಜು ಮಧ್ಯೆ ಪ್ರಬಲ ಪೈಪೋಟಿ ಶುರುವಾಗಿದೆ.

ಅಂದ ಹಾಗೆ ಈ ಪೈಕಿ ವಿನಯ್ ಕಾರ್ತಿಕ್ ಮುಂದಿದ್ದಾರಾದರೂ ತಾವು ಕಣಕ್ಕಿಳಿಸಿರುವ ಗೋವಿಂದರಾಜು ಅವರ ಮೂಲಕ ಒಂದು ಟೆಸ್ಟ್ ಡೋಸ್ ಗೆ ಕುಮಾರಸ್ವಾಮಿ ಸಜ್ಜಾಗಿದ್ದಾರೆ.
ಅರ್ಥಾತ್,ತಮ್ಮ ಪಕ್ಷಕ್ಕಿರುವ ಬಲ ಕಡಿಮೆಯಾಧರೂ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಜನಾರ್ಧನ ರೆಡ್ಡಿಯವರ ಮತಗಳು ತಮಗೆ ಬರುತ್ತವೆ.ಇದೇ ರೀತಿ ಬಿಜೆಪಿಯಿಂದ ಮಿನಿಮಮ್ ನಾಲ್ಕು ಮತಗಳು ಬರುತ್ತವೆ.ಉಳಿದಂತೆ ಕಾಂಗ್ರೆಸ್ ಬುಟ್ಟಿಯಿಂದ ಒಂದಷ್ಟು ಮತಗಳನ್ನು ಕೀಳುವುದು ಅವರ ಯೋಚನೆ.

ಅಂತಿಮವಾಗಿ ಈ ಪ್ರಯತ್ನ ಯಶಸ್ವಿಯಾದರೆ ಕಾಂಗ್ರೆಸ್ ಗೆ ಮುಖಭಂಗ ಮಾಡಿದಂತಾಗುತ್ತದೆ.ಒಂದು ವೇಳೆ ಸೋತರೆ ನಷ್ಟವೇನೂ ಇಲ್ಲ. ಬದಲಿಗೆ ಈ ಸ್ಪರ್ಧೆಯಿಂದ ಮೂರು ವಿಷಯಗಳು ನಿಕ್ಕಿಯಾಗುತ್ತವೆ.ಒಂದು,ತಮ್ಮ ಪಕ್ಷದಲ್ಲಿ ಯಾರಾದರೂ ಮೀರ್ ಸಾದಿಕ್ ಗಳಿದ್ದಾರಾ ಎಂಬುದನ್ನು ಕನ್ ಫರ್ಮ್ ಮಾಡಿಕೊಳ್ಳುವುದು,ಎರಡನೆಯದಾಗಿ ಮೈತ್ರಿಯ ವಿಷಯದಲ್ಲಿ ಬಿಜೆಪಿ ಎಷ್ಟು ಪ್ರಾಮಾಣಿಕವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳುವುದು ಮತ್ತು ಮೂರನೆಯದಾಗಿ,ಈ ಅನುಭವದ ಆಧಾರದ ಮೇಲೆ ಮುಂದಿನ‌ ದಿನಗಳ ರಣತಂತ್ರವನ್ನು ನಿರ್ಧರಿಸುವುದು ಎಂಬುದು ಕುಮಾರಸ್ವಾಮಿ ಅವರ ಯೋಚನೆ.‌

ಆರ್.ಟಿ ವಿಠಲಮೂರ್ತಿ, ಹಿರಿಯ ಪತ್ರಕರ್ತರು