ದ.ಕ.ದಲ್ಲಿ 95 ಸಾವಿರ ಜನ ಲಸಿಕೆಯಿಂದ ದೂರ ; 95 ಶೇ. ಒಂದು ವರ್ಗದ ಯುವಕರೇ ಹೆಚ್ಚು ! ಅಧಿಕಾರಿಗಳಿಗೆ ಸವಾಲಾದ ಮುಖ್ಯಮಂತ್ರಿ ಟಾಸ್ಕ್ !  

19-01-22 10:49 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಪೂರ್ತಿಯಾಗದಿರುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಗರಂ ಆಗಿದ್ದು ಅಧಿಕಾರಿಗಳಿಗೆ ಈ ತಿಂಗಳೊಳಗೆ ಮುಗಿಸಲು ಟಾಸ್ಕ್ ಕೊಟ್ಟಿದ್ದಾರೆ.

ಮಂಗಳೂರು, ಜ.19 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಪೂರ್ತಿಯಾಗದಿರುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಗರಂ ಆಗಿದ್ದು ಅಧಿಕಾರಿಗಳಿಗೆ ಈ ತಿಂಗಳೊಳಗೆ ಮುಗಿಸಲು ಟಾಸ್ಕ್ ಕೊಟ್ಟಿದ್ದಾರೆ. ಈ ವೇಳೆ ಅಲ್ಪಸಂಖ್ಯಾತ ವರ್ಗದ ಜನರು ಲಸಿಕೆ ಬಗ್ಗೆ ಹಿಂಜರಿಕೆ ಹೊಂದಿದ್ದಾರೆ ಎಂಬ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದು ಹೀಗಾಗಿ ಧಾರ್ಮಿಕ ಮುಖಂಡರ ಮೂಲಕ ಮನವೊಲಿಕೆ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾಗಿ ತಿಳಿದುಬಂದಿದೆ.

ಹೀಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಎಲರ್ಟ್ ಆಗಿದ್ದು, ಒಟ್ಟು 95 ಸಾವಿರ ಮಂದಿ ಜಿಲ್ಲೆಯಲ್ಲಿ ಲಸಿಕೆ ಹಾಕಿಸಿಲ್ಲ ಎಂಬ ವಿಚಾರದ ಬಗ್ಗೆ ತೀವ್ರ ಚರ್ಚೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಇಂದು ವರ್ಚುವಲ್ ಮೂಲಕ ಸಭೆ ನಡೆಸಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರ ಮೂಲಕ ಪ್ರತಿ ಮನೆಗೆ ಭೇಟಿ ನೀಡಿ ಮನವೊಲಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಮಾಹಿತಿ ನೀಡಿದ ಜಿಪಂ ಸಿಇಓ ಡಾ.ಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿ 16 ಸಾವಿರ, ಬೆಳ್ತಂಗಡಿ 19 ಸಾವಿರ, ಮಂಗಳೂರು 21 ಸಾವಿರ, ಪುತ್ತೂರು 26 ಸಾವಿರ, ಸುಳ್ಯ 10 ಸಾವಿರ ಸೇರಿ ಒಟ್ಟು 95 ಸಾವಿರ ಜನ ಮೊದಲ ಡೋಸ್ ಪಡೆಯಲು ಬಾಕಿ ಇದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಅಧಿಕಾರಿಗಳ ಮಾಹಿತಿ ಪ್ರಕಾರ, ಕೇರಳ ಗಡಿಭಾಗವನ್ನು ಹೊಂದಿಕೊಂಡಿರುವ ಭಾಗದಲ್ಲಿ ಒಂದು ವರ್ಗದ ಜನರು ಹೆಚ್ಚಾಗಿ ಲಸಿಕೆ ಪಡೆದಿಲ್ಲ. ಇಡೀ ಜಿಲ್ಲೆಯಲ್ಲಿ ಲಸಿಕೆ ಪಡೆಯದವರ ಪೈಕಿ 95 ಶೇಕಡಾ ಮುಸ್ಲಿಮರಿದ್ದಾರೆ. ಅದರಲ್ಲೂ ಯುವಕರೇ ಹೆಚ್ಚು ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಲಸಿಕೆ ಬಗ್ಗೆ ಅಪನಂಬಿಕೆ, ಲಸಿಕೆ ಪಡೆದು ಏನೂ ಬದಲಾವಣೆ ಆಗಲ್ಲ ಎಂಬ ಅಸಡ್ಡೆ, ಮಕ್ಕಳಾಗಲ್ಲ ಎಂಬ ಮೌಢ್ಯತನದಿಂದಾಗಿ ಒಂದು ವರ್ಗದ ಜನರು ಲಸಿಕೆ ಪಡೆಯದೆ ದೂರ ಉಳಿದಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಅದರಲ್ಲೂ ಮಂಗಳೂರಿನಲ್ಲಿ ಉಳ್ಳಾಲ, ಕೋಟೆಕಾರು, ತಲಪಾಡಿಯಲ್ಲಿ ಹೆಚ್ಚು ಮಂದಿ ಲಸಿಕೆ ಪಡೆದಿಲ್ಲ ಎನ್ನುವ ಮಾಹಿತಿ ಇದೆ.

ಇದಕ್ಕಾಗಿ ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಹಾಗೂ ಜನಪ್ರತಿನಿಧಿಗಳನ್ನು ಜಾಗೃತಿ ಮಾಡಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ 1.80 ಲಕ್ಷ ಜನರಿಗೆ ಎರಡನೇ ಡೋಸ್ ಬಾಕಿ ಉಳಿದಿದ್ದು, ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಆರು ದಿನದೊಳಗೆ ಲಸಿಕೆ ಪೂರ್ಣಗೊಳಿಸಬೇಕು ಎಂದು ಹೇಳಿದ್ದಾರೆ. ಆದರೆ ಕೆಲವು ನಿರ್ದಿಷ್ಟ ವರ್ಗದ ಜನರು ಉದ್ದೇಶಪೂರ್ವಕ ಲಸಿಕೆಯಿಂದ ದೂರವುಳಿದಿದ್ದು ಅಧಿಕಾರಿಗಳ ಪಾಲಿಗೆ ಮುಖ್ಯಮಂತ್ರಿ ಟಾಸ್ಕ್ ಪೂರ್ತಿಗೊಳಿಸುವುದು ಸವಾಲಾಗಿ ಪರಿಣಮಿಸಿದೆ.

Mangalore 95 percent of Minorities not vaccinated specially youngsters says DK Dc Rajendra.