Mangalore Railway Station News: ರೈಲ್ವೇ ನಿಲ್ದಾಣದಲ್ಲಿ ಕೈಕೊಟ್ಟ ಇಂಜಿನ್ ; ಎರಡು ಗಂಟೆ ರೈಲು ಸಂಚಾರಕ್ಕೆ ತೊಡಕು, ಪ್ರಯಾಣಿಕರಿಗೆ ತೊಂದರೆ

11-03-25 10:10 pm       Mangalore Correspondent   ಕರಾವಳಿ

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲಿನ ಇಂಜಿನ್ ತಾಂತ್ರಿಕ ವೈಫಲ್ಯದಿಂದ ಕೆಟ್ಟು ಹಳಿಯ ಮಧ್ಯೆ ಬಾಕಿಯಾಗಿದ್ದರಿಂದ ಮಂಗಳವಾರ ಸಂಜೆಯ ವೇಳೆಗೆ ಎರಡು ಗಂಟೆ ಕಾಲ ರೈಲು ಸಂಚಾರ ವ್ಯತ್ಯಯಗೊಂಡು ಪ್ರಯಾಣಿಕರು ತೊಂದರೆ ಅನುಭವಿಸಿದರು.

ಮಂಗಳೂರು, ಮಾ.11: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲಿನ ಇಂಜಿನ್ ತಾಂತ್ರಿಕ ವೈಫಲ್ಯದಿಂದ ಕೆಟ್ಟು ಹಳಿಯ ಮಧ್ಯೆ ಬಾಕಿಯಾಗಿದ್ದರಿಂದ ಮಂಗಳವಾರ ಸಂಜೆಯ ವೇಳೆಗೆ ಎರಡು ಗಂಟೆ ಕಾಲ ರೈಲು ಸಂಚಾರ ವ್ಯತ್ಯಯಗೊಂಡು ಪ್ರಯಾಣಿಕರು ತೊಂದರೆ ಅನುಭವಿಸಿದರು.

ಮಂಗಳೂರು – ಚೆನ್ನೈ ಎಕ್ಸ್ ಪ್ರೆಸ್ ರೈಲಿಗೆ ಜೋಡಿಸಲು ಯಾರ್ಡ್ ನಿಂದ ಸಂಜೆ ನಾಲ್ಕು ಗಂಟೆಯ ವೇಳೆಗೆ ಇಂಜಿನ್ ತರಿಸಲಾಗಿತ್ತು. ಇಂಜಿನ್ ಸ್ಟೇಶನ್ ಪ್ಲಾಟ್ ಫಾರಂ ಕಡೆಗೆ ಬರುತ್ತಿದ್ದಾಗಲೇ ಹಳಿಯ ಮಧ್ಯೆ ಕೆಟ್ಟು ನಿಂತಿದ್ದರಿಂದ ಹೋಗುವ ಮತ್ತು ಬರುವ ರೈಲುಗಳ ಸಂಚಾರಕ್ಕೆ ತೊಡಕಾಗಿತ್ತು. ಇದರಿಂದಾಗಿ ತಿರುವನಂತಪುರ ಮತ್ತು ಕೊಯಂಬತ್ತೂರಿನಿಂದ ಬಂದಿದ್ದ ರೈಲು ಉಳ್ಳಾಲದ ನೇತ್ರಾವತಿ ಸೇತುವೆ ಬಳಿಯಲ್ಲೇ ಬಾಕಿಯಾಗಿದ್ದವು. 4.40 ಮತ್ತು 5.20ಕ್ಕೆ ಬಂದಿದ್ದ ರೈಲುಗಳು ಸ್ಟೇಶನ್ ತಲುಪದೆ ಪ್ರಯಾಣಿಕರು ಎರಡು ಗಂಟೆ ಕಾಲ ರೈಲಿನಲ್ಲೇ ಕುಳಿತು ತೊಂದರೆ ಅನುಭವಿಸಿದರು. ಇತ್ತ ಅವರನ್ನು ಬರಮಾಡಿಕೊಳ್ಳಲು ಬಂದಿದ್ದ ಸಂಬಂಧಿಕರು ಕೂಡ ಕಾದು ಕುಳಿತುಕೊಳ್ಳುವಂತಾಗಿತ್ತು.

ಹಳಿಯಲ್ಲಿ ಇಂಜಿನ್ ಕೆಟ್ಟು ನಿಂತಿದ್ದರಿಂದ ಎಲ್ಲ ರೈಲುಗಳಿಗೂ ರೆಡ್ ಸಿಗ್ನಲ್ ನೀಡಲಾಗಿತ್ತು. ಸಂಜೆ 6.45ಕ್ಕೆ ತಾಂತ್ರಿಕ ಸಮಸ್ಯೆ ಸರಿಯಾಗಿದ್ದು, ಬಳಿಕ ಅರ್ಧಕ್ಕೆ ಉಳಿದಿದ್ದ ರೈಲುಗಳಿಗೆ ಬರುವುದಕ್ಕೆ ಅವಕಾಶ ನೀಡಲಾಯಿತು. ಅಷ್ಟರಲ್ಲಿ ಬಹುತೇಕ ಪ್ರಯಾಣಿಕರು ರೈಲಿನಿಂದ ಇಳಿದು ಹಳಿಯಲ್ಲಿ ನಡೆಯುತ್ತ ಬಂದಿದ್ದರು. ವಯಸ್ಸಾದವರು ಮಾತ್ರ ರೈಲಿನಲ್ಲಿ ಉಳಿದುಕೊಂಡಿದ್ದರು. ಇತ್ತ ಮಂಗಳೂರು ಸೆಂಟ್ರಲ್ ಕಡೆಯಿಂದ ನಿರ್ಗಮಿಸುವ ರೈಲುಗಳೂ ವಿಳಂಬವಾಗಿ ಹೊರಟಿದ್ದು, ರಾತ್ರಿ ಎಂಟು ಗಂಟೆ ವೇಳೆಗೆ ಎಲ್ಲವೂ ಸರಿಯಾಯ್ತು ಎಂದು ರೈಲ್ವೇ ಪಿಆರ್ ಓ ದೇವಾನಂದ್ ತಿಳಿಸಿದ್ದಾರೆ.

Train services at Mangalore Central Railway Station faced disruptions today due to a malfunction in the engine of the Mangalore-Chennai Central train. The incident occurred shortly after the train departed from the yard and was preparing to attach to its bogies.