Mangalore Urban health centre, Mangalore ; ಬಿಜೆಪಿ- ಕಾಂಗ್ರೆಸ್ ರಾಜಕೀಯ ಮೇಲಾಟ ; ಜಪ್ಪಿನಮೊಗರು ಆರೋಗ್ಯ ಕೇಂದ್ರಕ್ಕೆ ನಾಲ್ಕೇ ದಿನದಲ್ಲಿ ಬೀಗ, ಸಿಬಂದಿ- ಸಾರ್ವಜನಿಕರಿಗೆ ಪೀಕಲಾಟ, ಶಿಷ್ಟಾಚಾರ ನೆಪ- ಉಸ್ತುವಾರಿ ನೇತೃತ್ವದಲ್ಲಿ ಮತ್ತೆ ಉದ್ಘಾಟನೆ ಯೋಗ !

14-02-25 10:22 pm       Mangalore Correspondent   ಕರಾವಳಿ

ಜಪ್ಪಿನಮೊಗರಿನಲ್ಲಿ ಫೆ.9ರಂದು ಉದ್ಘಾಟನೆಯಾಗಿದ್ದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಾಲ್ಕೇ ದಿನದಲ್ಲಿ ಬೀಗ ಬಿದ್ದಿದೆ.

ಮಂಗಳೂರು, ಫೆ.14: ಜಪ್ಪಿನಮೊಗರಿನಲ್ಲಿ ಫೆ.9ರಂದು ಉದ್ಘಾಟನೆಯಾಗಿದ್ದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಾಲ್ಕೇ ದಿನದಲ್ಲಿ ಬೀಗ ಬಿದ್ದಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತನ್ನ ಗಮನಕ್ಕೆ ತಾರದೆ ಆರೋಗ್ಯ ಕೇಂದ್ರವನ್ನು ಉದ್ಘಾಟನೆ ಮಾಡಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್ ತಿಮ್ಮಯ್ಯ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಲು ಸೂಚಿಸಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿದ್ದ ಜಪ್ಪಿನಮೊಗರು ಆರೋಗ್ಯ ಕೇಂದ್ರವನ್ನು ಫೆ.9ರಂದು ಬಿಜೆಪಿ ಸಂಸದ, ಶಾಸಕರು ಮತ್ತು ಮೇಯರ್ ನೇತೃತ್ವದಲ್ಲಿ ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗಿತ್ತು. ಈ ವೇಳೆ, ಶಿಷ್ಟಾಚಾರ ಪ್ರಕಾರ ಜಿಲ್ಲಾ ಮಟ್ಟದ ಅಧಿಕಾರಿಗಳು ಇರಬೇಕಿತ್ತು. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಸಚಿವರೂ ಆದ ದಿನೇಶ್ ಗುಂಡೂರಾವ್ ಗಮನಕ್ಕೆ ತರಬೇಕಿತ್ತು. ಆದರೆ ಮಹಾನಗರ ಪಾಲಿಕೆಯವರು ಕಾರ್ಯಕ್ರಮ ಆಯೋಜಿಸಿದ್ದರಿಂದ ಜಿಲ್ಲಾಡಳಿತದ ಗಮನಕ್ಕೆ ತಂದಿರಲಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಅಂದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿರಲಿಲ್ಲ.

ಸ್ಮಾರ್ಟ್ ಸಿಟಿಯ ಅನುದಾನ ಆಗಿದ್ದರಿಂದ ಪಾಲಿಕೆಯವರು ಮೇಯರ್ ಮನೋಜ್ ಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಅದೇ ದಿನ ಮಂಗಳಾದೇವಿ ವಾರ್ಡ್ ನಲ್ಲಿ ಸ್ಮಾರ್ಟ್ ಸಿಟಿಯಡಿ ಅಭಿವೃದ್ಧಿ ಪಡಿಸಲಾದ ಪಶು ಆಸ್ಪತ್ರೆ, ಪಾಲಿಕೆಯ ನೌಕರರ ಅಪಾರ್ಟ್ಮೆಂಟ್ ಕಟ್ಟಡ, ಬಸ್ ಬೇ ಮತ್ತು ವಾಕಿಂಗ್ ಪಾತ್ ಕಾಮಗಾರಿಯನ್ನೂ ಉದ್ಘಾಟನೆ ಮಾಡಲಾಗಿತ್ತು. ಆದರೆ ಜಿಲ್ಲಾಡಳಿತದ ಗಮನಕ್ಕೆ ತರದೇ ಕಾರ್ಯಕ್ರಮ ಆಯೋಜಿಸಿದ್ದರಿಂದ ಕಾಂಗ್ರೆಸ್ ನಾಯಕರೂ ದೂರ ಉಳಿದಿದ್ದರು. ಸರಕಾರಿ ಕಾರ್ಯಕ್ರಮ ಆಗಿದ್ದರೂ ವಾರ್ತಾ ಇಲಾಖೆ ಗಮನಕ್ಕೂ ಬಂದಿರಲಿಲ್ವಂತೆ.

ಮಾಹಿತಿ ಪ್ರಕಾರ, ಕೆಲವು ದಿನಗಳ ಹಿಂದೆ ಜಪ್ಪು ಆರೋಗ್ಯ ಕೇಂದ್ರ ಮತ್ತಿತರ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ಎಂಎಲ್ಸಿ ಐವಾನ್ ಡಿಸೋಜ ತೆರಳಿದ್ದರು. ಜಿಲ್ಲಾ ಉಸ್ತುವಾರಿ ಬರುವ ಸಂದರ್ಭದಲ್ಲಿ ಅದ್ದೂರಿಯಾಗಿ ಉದ್ಘಾಟನೆ ನೆರವೇರಿಸುವುದೆಂದು ರೆಡಿ ಮಾಡಿಕೊಂಡಿದ್ದರು. ಇದನ್ನು ತಿಳಿದ ಬಿಜೆಪಿಗರು ಕಾಂಗ್ರೆಸಿಗರಿಗೆ ತಿಳಿಸದೇ ತಮ್ಮ ಸರ್ಕಾರದಲ್ಲಿ ಮಾಡಿದ್ದನ್ನು ತಾವೇ ಉದ್ಘಾಟನೆ ಮಾಡುತ್ತೇವೆಂದು ತರಾತುರಿಯಲ್ಲಿ ಕಾರ್ಯಕ್ರಮ ನೆರವೇರಿಸಿದ್ದರು. ಜಪ್ಪಿನಮೊಗರು ಆರೋಗ್ಯ ಕೇಂದ್ರ ಉದ್ಘಾಟನೆ ಆಗುತ್ತಿದ್ದಂತೆ ಸೂಟರ್ ಪೇಟೆಯಲ್ಲಿ ಒಂದು ತಿಂಗಳಿನಿಂದ ನಡೆಸುತ್ತಿದ್ದ ‘’ನಮ್ಮ ಕ್ಲಿನಿಕ್ ’’ ಅನ್ನು ಆರೋಗ್ಯ ಸಿಬಂದಿ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದ್ದರು. ಸಿಬಂದಿ, ಸಲಕರಣೆ ಸ್ಥಳಾಂತರಗೊಂಡು ಸಾರ್ವಜನಿಕರೂ ಹೊಸ ಕಟ್ಟಡದಲ್ಲಿ ಸೇವೆ ಬಳಸಿಕೊಂಡಿದ್ದರು. ಗುರುವಾರ ಬೆಳಗ್ಗೆ ವ್ಯಾಕ್ಸಿನ್ ನೀಡುವ ಕಾರ್ಯಕ್ರಮ ಆಗುತ್ತಿದ್ದಾಗಲೇ ಡಿಎಚ್ಓ ಆರೋಗ್ಯ ಕೇಂದ್ರ ಮುಚ್ಚಲು ಆದೇಶ ಮಾಡಿದ್ದಾರೆ. ಇದರಿಂದ ಸಿಬಂದಿ ನಿರಾಶೆಗೊಂಡಿದ್ದಲ್ಲದೆ, ಮತ್ತೆ ಸೂಟರ್ ಪೇಟೆಯ ಹಳೆ ಕಟ್ಟಡಕ್ಕೆ ಸ್ಥಳಾಂತರ ಆಗಿದ್ದಾರೆ.

ಅವರಷ್ಟಕ್ಕೇ ಮಾಡಲು ಖಾಸಗಿ ಆಸ್ತಿಯಾ ?

ಈ ಕುರಿತ ಮಾಧ್ಯಮದ ಪ್ರಶ್ನೆಗೆ ಸಚಿವ ದಿನೇಶ್ ಗುಂಡೂರಾವ್, ಆರೋಗ್ಯ ಕೇಂದ್ರ ಉದ್ಘಾಟನೆ ಮಾಡುವುದಕ್ಕೆ ಅವರು ಯಾರು. ಅದೇನು ಅವರ ಖಾಸಗಿ ಆಸ್ತಿಯಾ. ನನ್ನ ಅಥವಾ ಜಿಲ್ಲಾಧಿಕಾರಿಯ ಗಮನಕ್ಕೆ ತಾರದೆ ಉದ್ಘಾಟನೆ ಮಾಡಿದ್ದನ್ನು ಸಹಿಸುವುದಿಲ್ಲ. ಫೆ.15ರಂದು ಮಂಗಳೂರಿಗೆ ಬರಲಿದ್ದು, ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಡುತ್ತೇನೆ ಎಂದಿದ್ದಾರೆ. ಜಿಲ್ಲಾಡಳಿತದ ಗಮನಕ್ಕೆ ತಾರದೇ ಉದ್ಘಾಟನೆ ಮಾಡಿರುವುದು ತಪ್ಪು. ಈ ಬಗ್ಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಆರೋಗ್ಯ ಕೇಂದ್ರ ಮುಚ್ಚಿದ್ದು ತಪ್ಪು

ಮೇಯರ್ ಮನೋಜ್ ಕುಮಾರ್, ಹತ್ತು ದಿನಗಳ ಹಿಂದೆಯೇ ಅಬಿವೃದ್ಧಿ ಕಾಮಗಾರಿ ಉದ್ಘಾಟನೆ ಬಗ್ಗೆ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಕಮಿಷನರ್ ಗಮನಕ್ಕೆ ತಂದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವುದು ಅಧಿಕಾರಿಗಳ ಜವಾಬ್ದಾರಿ ಎಂದಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಪ್ರತಿಕ್ರಿಯಿಸಿ, ಮೇಯರ್ ಆಹ್ವಾನದಂತೆ ನಾನು ಮತ್ತು ಸಂಸದರು ಕಾರ್ಯಕ್ರಮಕ್ಕೆ ಹೋಗಿದ್ದೆವು. ಸ್ಮಾರ್ಟ್ ಸಿಟಿಯ 7.85 ಕೋಟಿ ಅನುದಾನದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಸಲಾಗಿದ್ದ ಕಾಮಗಾರಿ. ಅದನ್ನು ಉದ್ಘಾಟನೆ ಮಾಡಿದ್ದೇವೆ. ಈಗ ಉಸ್ತುವಾರಿ ಸಚಿವರಿಗೆ ಆಹ್ವಾನ ನೀಡಿಲ್ಲವೆಂದು ಮತ್ತೆ ಉದ್ಘಾಟನೆ ಮಾಡುವುದಿದ್ದರೆ ಮಾಡಲಿ. ಹಾಗಂತ, ಸಾರ್ವಜನಿಕರ ಬಳಕೆಯಲ್ಲಿರುವ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿದ್ದು ತಪ್ಪು. ನಾನಿದನ್ನು ಖಂಡಿಸುತ್ತೇನೆ ಎಂದಿದ್ದಾರೆ.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಳೆದ ಒಂದು ವಾರದಿಂದ ಮಂಗಳೂರಿನಲ್ಲಿ ಇರಲಿಲ್ಲ. ತರಬೇತಿ ಕಾರ್ಯಕ್ರಮಕ್ಕೆಂದು ದೆಹಲಿಗೆ ತೆರಳಿದ್ದವರು ಫೆ.14ರಂದು ಮರಳಿದ್ದಾರೆ. ಇದರ ನಡುವೆಯೇ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಆಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಂದಿರಲಿಲ್ಲ. ಆರೋಗ್ಯ ಕೇಂದ್ರ ದಿನೇಶ್ ಗುಂಡೂರಾವ್ ಇಲಾಖೆಗೆ ಒಳಪಟ್ಟಿದ್ದರಿಂದ ಅದರ ಉದ್ಘಾಟನೆಯನ್ನು ಮತ್ತೊಮ್ಮೆ ಮಾಡುವುದಕ್ಕೆ ಫೆ.15ರಂದು ನಿಗದಿ ಮಾಡಲಾಗಿದೆ.

The Urban Primary Health Centre (UPHC) in Jeppu, which resumed its operation from its renovated building since its inauguration on Sunday, February 9, was ordered to be closed on Thursday as District in charge Minister and Health Minister Dinesh Gundu Rao was not invited for the inauguration